ಬೃಹತ್ಕಥಾ ಶ್ಲೋಕ ಸಂಗ್ರಹ -
ಬುಧ (ಬುದ್ಧ) ಸ್ವಾಮಿಯಿಂದ ರಚಿತವಾದುದು. ಸೋಮದೇವನ ಕಥಾಸರಿತ್ಸಾಗರ, ಕ್ಷೇಮೇಂದ್ರನ ಬೃಹತ್ಕಥಾಮಂಜರಿಗಳಂತೆ ಇದೂ ಬೃಹತ್ಕಥೆಯಲ್ಲಿಯ ಕಥೆಯನ್ನು ಸಂಗ್ರಹವಾಗಿ ನಿರೂಪಿಸಿರುವ ಗ್ರಂಥ. ಆದರೆ ಆ ಎರಡೂ ಗ್ರಂಥಗಳಲ್ಲಿ ಕವಿ ಕಥೆಯನ್ನು ಬಣ್ಣಿಸುತ್ತಾನೆ. ಇಲ್ಲಿ ನರವಾಹನನೇ (ನರವಾಹನ ದತ್ತ) ತನ್ನ ಕಥೆ ಹೇಳುತ್ತಾನೆ. ಇದರ ಕಾಲ ಗೊತ್ತಿಲ್ಲ. ಸುಮಾರು ಎಂಟು ಅಥವಾ ಒಂಬತ್ತನೆಯ ಶತಮಾನವೆಂದು ಲಕೋತ್ ಅವರ ಅಭಿಪ್ರಾಯ. ಇದರ ಹಸ್ತಪ್ರತಿಗಳು ನೇಪಾಳದಲ್ಲಿ ದೊರೆತುದರಿಂದ ಕರ್ತೃ ನೇಪಾಳದವನೆಂದು ಊಹಿಸಲಾಗಿದೆ. ಎಂದೇ ಇದಕ್ಕೆ ನೇಪಾಳದ ಬೃಹತ್ಕಥಾಸಾರ ಎಂದೂ ಹೆಸರುಂಟು.

ಬುಧಸ್ವಾಮಿ ಯಾವ ದೇಶ ಕಾಲದವನೆಂದು ತಿಳಿಯದು. ಈ ತನಕ ದೊರೆತಿರುವುದು ಈ ಗ್ರಂಥದ ಮೊದಲನೆಯ 28 ಸರ್ಗಗಳು ಮಾತ್ರ. ಇವುಗಳಲ್ಲಿ 4,539 ಶ್ಲೋಕಗಳಿವೆ. ಗ್ರ್ರಂಥವನ್ನು ಲಕೋತ್ ಅವರು ಪರಿಷ್ಕರಿಸಿ ಫ್ರೆಂಚ್ ಭಾಷೆಯ ಅನುವಾದದೊಡನೆ (1908) ಪ್ರಕಟಿಸಿದ್ದಾರೆ. ಇದು ಮೂಲ ಬೃಹತ್ಕಥೆಗೆ ಹೆಚ್ಚು ಹತ್ತಿರವಾಗುತ್ತದೆಂದು ವಿದ್ವಾಂಸರ ಅಭಿಪ್ರಾಯ. ಈ ಗ್ರ್ರಂಥದಲ್ಲಿ ಹೇಳಿರುವ ಕಥಾಮುಖ ಹೀಗಿದೆ:

	ಕೌಶಾಂಬಿ ರಾಜನಾದ ಚಂಡ ಪ್ರದ್ಯೋತ ಕಾಲವಾದ್ದರಿಂದ ಅವನ ಹಿರಿಯ ಮಗ ಗೋಪಾಲಕ ರಾಜನಾಗ ಬೇಕಾಗಿತ್ತು. ಆದರೆ ತಂದೆಯ ಸಾವಿಗೆ ಕಾರಣನೆಂದು ಅವನ ವಿಷಯವಾಗಿ ಅಪವಾದವಿದ್ದದ್ದರಿಂದ ಅವನು ತನ್ನ ತಮ್ಮನಾದ ಪಾಲಕನೇ ರಾಜನಾಗಬೇಕೆಂದು ಹೇಳಿ ಹೋಗುವನು. ಪಾಲಕ ಸ್ವಲ್ಪ ಕಾಲ ರಾಜ್ಯವಾಳಿ ಅನಂತರ ಗೋಪಾಲಕನ ಮಗನಾದ ಅವಂತಿವರ್ಧನನಿಗೆ ರಾಜ್ಯ ಕೊಟ್ಟು ತಾನೂ ಹೊರಟು ಹೋಗುವನು. ಅವಂತಿವರ್ಧನ ಒಬ್ಬ ಮಾತಂಗನ ಮಗಳಾದ ಸುರಸಮಂಜರಿ ಎಂಬ ಸುಂದರ ಕನ್ನಿಕೆಯಲ್ಲಿ ಅನುರಕ್ತನಾಗಿ ಅವಳನ್ನು ಮದುವೆ ಯಾಗುವನು. ಈ ಕನ್ನಿಕೆ ನಿಜವಾಗಿ ಮಾತಂಗ ಕನ್ಯೆಯಲ್ಲ. ಶಾಪದೋಷದಿಂದ ಇವಳು ಮಾತಂಗರ ಕೇರಿಯಲ್ಲಿ ವಾಸಮಾಡಬೇಕಾಯಿತು. ಇವಳನ್ನು ಇಪ್ಪಕನೆಂಬ ವಿದ್ಯಾಧರ ಅಪಹರಿಸಿಕೊಂಡು ಹೋಗುತ್ತಿದ್ದಾಗ ದಿವಾಕರದೇವನೆಂಬ ಮತ್ತೊಬ್ಬ ವಿದ್ಯಾಧರ ಅವನನ್ನು ಹಿಡಿದು ವಿದ್ಯಾಧರ ಚಕ್ರವರ್ತಿಯಾದ ನರವಾಹನದತ್ತನ ಮುಂದೆ ಅವನು ಮಾಡಿದ ಅಪರಾಧ ತಿಳಿಸುತ್ತಾನೆ. ನರವಾಹನ ಇಪ್ಪಕನ ಹೇಳಿಕೆಯನ್ನು ಕೇಳಿ ಸುರಸಮಂಜರಿ ಆವಂತಿ ವರ್ಧನನ ಹೆಂಡತಿ ಎಂದೂ ಇಪ್ಪಕನಿಗೆ ಅವಳನ್ನು ಅಪಹರಿಸಿಕೊಂಡು ಹೋಗಲು ಯಾವ ಹಕ್ಕು ಇಲ್ಲವೆಂದೂ ತೀರ್ಪು ಕೊಡುತ್ತಾನೆ. ಆಗ ಅಲ್ಲಿದ್ದ ಋಷಿಗಳೆಲ್ಲರೂ ಈ ತೀರ್ಪು ಮೆಚ್ಚಿ ಮನುಷ್ಯನಾಗಿ ಹುಟ್ಟಿ ನೀನು ಹೇಗೆ ವಿದ್ಯಾಧರ ಚಕ್ರವರ್ತಿ ಪದ ಹೊಂದಿದೆ? ಈ ವೃತ್ತಾಂತ ನಮಗೆ ತಿಳಿಸು ಎಂದು ಕೇಳಿಕೊಳ್ಳುತ್ತಾರೆ. ಆಗ ನರವಾಹನ ಋಷಿಗಳ ಕೋರಿಕೆಯಂತೆ ತನ್ನ ವೃತ್ತಾಂತ ಹೇಳುವುದಕ್ಕೆ ಪ್ರಾರಂಭಿಸಿ ಉದಯನರಾಜನಿಗೆ ಪುತ್ರನನ್ನು ಪಡೆಯಬೇಕೆಂಬ ಇಚ್ಛೆ ಕೈಗೂಡಿ ತಾನು ಅವನಿಗೆ ಮಗನಾಗಿ ಹುಟ್ಟಿದ್ದು; ತನಗೆ ಯೌವನವುಂಟಾದಾಗ ತನ್ನಲ್ಲಿದ್ದ ವಿದ್ಯಾಧರ ಚಕ್ರವರ್ತಿ ಸೂಚಕ ಲಕ್ಷಣಗಳನ್ನು ನೋಡಿ ಅಮಿತಗತಿಯೆಂಬ ವಿದ್ಯಾಧರ ತನ್ನ ಅನುಚರನಾದುದು; ಕಲಿಂಗಸೇನೆಯೆಂಬ ವಾರಸ್ತ್ರೀಯ ಮಗಳಾದ ಮದನಮಂಜುಕೆಯಲ್ಲಿ ತಾನು ಅನುರಕ್ತನಾದುದು; ಅವಳನ್ನು ಮಾನಸ ವೇಗನೆಂಬ ವಿದ್ಯಾಧರ ಅಪಹರಿಸಿದರು. ಮದನಮಂಜುಕೆಯ ರೂಪ ಧರಿಸಿಕೊಂಡು ವೇಗವತಿ ತನ್ನನ್ನು ಮದುವೆಯಾದದ್ದು, ಸಾನುದಾಸನ ಮಗಳು ಗಂಧರ್ವದತ್ತೆಯನ್ನೂ ತದನಂತರ ಪ್ರಿಯದರ್ಶಿಕೆಯನ್ನೂ ಅಂಜನಾವತಿಯನ್ನೂ ಮದುವೆಯಾದುದು ಎಂದು ಇಷ್ಟು ವೃತ್ತಾಂತ ತಿಳಿಸುತ್ತಾನೆ. ಮುಂದಿನ ಕಥೆಯ ಪ್ರಾರಂಭದಲ್ಲಿ 28ನೆಯ ಸರ್ಗ ಮುಗಿಯುತ್ತದೆ. (ಎ.ವಿ.)

	ನರವಾಹನದತ್ತ ತನ್ನ ವೃತ್ತಾಂತ ಹೇಳುತ್ತೇನೆಂದು ಹೊರಟರೂ ವಸ್ತುತಃ ಆತ ಉದಯನನಿಂದ ಆರಂಭಿಸುತ್ತಾನೆ. ವಾಸವದತ್ತೆ, ಪದ್ಮಾವತಿಯರು ಆಗಲೆ ಹೆಂಡತಿಯರಾಗಿರುತ್ತಾರೆ. ಸ್ವಪ್ನವಾಸವದತ್ತ ಮುಂತಾದ ಶೃಂಗಾರ ಕೃತಿಗಳಿಗೆ ವಸ್ತು ಒದಗಿಸಿಕೊಟ್ಟಿರುವ ಅವರ ಮದುವೆಗಳ ಪ್ರಸ್ತಾಪ ಇಲ್ಲಿಲ್ಲ. ಅವನು ಹುಟ್ಟಿದ್ದು ಬೆಳೆದದ್ದು ಮುಂತಾದ ಸಂಗತಿಗಳೂ ಸಂದರ್ಭ ಅನುಸರಿಸಿ ಸಿಂಹಾವಲೋಕನ ಕ್ರಮದಲ್ಲಿ ಸೂಚಿತವಾಗಿವೆ.

	ಕಥಾಸರಿತ್ಸಾಗರ, ಬೃಹತ್ಕಥಾಮಂಜರಿಗಳಿಗೆ ಹೋಲಿಸಿದರೆ ಈ ಕಾವ್ಯ ಎಲ್ಲ ವಿಧದಲ್ಲಿಯೂ ಉತ್ಕøಷ್ಟವಾಗಿದೆ. ಕವಿಗೆ ಶಬ್ದ ಸಂಪತ್ತು ಕರತಲಾಮಲಕವಾಗಿದೆ; ಭಾಷೆ ಸರಳವಾಗಿದೆ. ಸರ್ಗದ ಕೊನೆಯಲ್ಲಿ ಮಹಾಕಾವ್ಯ ಸಂಪ್ರದಾಯದಂತೆ ಭಿನ್ನವೃತ್ತವಿರುತ್ತದೆ. ಅಲ್ಲಲ್ಲೇ ತಿಳಿ ಮಧುರ ಹಾಸ್ಯವಿದೆ. ಅಂದಿನ ಸಮಾಜ ಚಿತ್ರಣವಿದೆ. ಸ್ವಲ್ಪವೂ ಗ್ರಾಮ್ಯತೆ ಇಲ್ಲ; ನೀಚತ್ವವಿಲ್ಲ; ಅಶ್ಲೀಲವಿಲ್ಲ; ವರ್ಣನೆ ಹಿತಮಿತವಾಗಿದೆ.												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ